ಕ್ರಿಶ್ಚನ್ 	

	15-20ನೆಯ ಶತಮಾನಗಳ ನಡುವೆ ಡೆನ್ಮಾರ್ಕ್-ನಾರ್ವೇಗಳಲ್ಲಿ ಈ ಹೆಸರಿನ ಹತ್ತು ಮಂದಿ ದೊರೆಗಳು ರಾಜ್ಯವಾಳಿದರು. ಅವರ ಬಗ್ಗೆ ವಿವರಗಳನ್ನು ಕೆಳಗೆ ನೀಡಲಾಗಿದೆ.

	ಕ್ರಿಶ್ಚನ್ I: 1426-1481. ಡೆನ್ಮಾರ್ಕ್, ನಾರ್ವೇ ಮತ್ತು ಸ್ವೀಡನ್ ದೇಶಗಳಲ್ಲಿ ಓಲ್ಡನ್‍ಬರ್ಗ್ ಸಂತತಿಯನ್ನು ಸ್ಥಾಪಿಸಿದ ಮೊಟ್ಟಮೊದಲನೆಯ ದೊರೆ. ಅವನಿಗೆ ಹಿಂದೆ ಇದ್ದ ದೊರೆ 3ನೆಯ ಕ್ರಿಸ್ಟೊಫರ್ ಉತ್ತರಾಧಿಕಾರಿಗಳಿಲ್ಲದೆ ಮರಣ ಹೊಂದಿದಾಗ ಕ್ರಿಶ್ಚನನ ಚಿಕ್ಕಪ್ಪನೂ ಹಾಲ್‍ಸ್ಟೇನ್ ಮತ್ತು ಷೆಲ್ಸ್‍ವಿನ್‍ನ ಡ್ಯೂಕನೂ ಆದ ಅಡಾಲ್ಫ್ ಸಿಂಹಾಸನಕ್ಕೆ ಹಕ್ಕುದಾರನಾಗಿದ್ದ. ಆದರೆ ಅಡಾಲ್ಫ್ ಆ ಹೊಣೆಯನ್ನು ವಹಿಸಲಿಚ್ಛಿಸದಿದ್ದುದರಿಂದ, ಗತಿಸಿದ ರಾಜನ ವಿಧವೆಯನ್ನು ಕ್ರಿಶ್ಚನ್ ವರಿಸಿ ಸಿಂಹಾಸನವನ್ನೇರಿದ. ಕ್ರಿಶ್ಚನ್ ರಾಜನಾದ ಅನಂತರ ಸ್ವೀಡನ್ ಮತ್ತೊಬ್ಬ ವಾರಸುದಾರನನ್ನು ತರಲು ಹವಣಿಸಿತು. ಆದರೆ ಕ್ರಿಶ್ಚನ್ ಚಾಣಾಕ್ಷತನದಿಂದ ಅವರ ವಿರೋಧವನ್ನು ತೊಡೆದುಹಾಕಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. 1469ರಲ್ಲಿ ಇವನ ಕುಮಾರಿ ಮಾರ್ಗರೆಟ್ ಸ್ಕಾಟ್ಲೆಂಡ್ ರಾಜಕುಮಾರ 3ನೆಯ ಜೇಮ್ಸನನ್ನು ವಿವಾಹವಾದಳು. ಈ ಸಂಬಂಧದಿಂದ ದೇಶದ ವಾಣಿಜ್ಯ ಪ್ರಗತಿ ಹೊಂದಿತು. ಕ್ರಿಶ್ಚನ್ ಪೋಪನೊಡನೆ ಒಪ್ಪಂದವನ್ನೇರ್ಪಡಿಸಿಕೊಂಡು, ಡೇನಿಷ್ ಚರ್ಚಿನ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸಿದ. ಪೋಪನ ಸಮ್ಮತಿಯನ್ನು ಪಡೆದು ಕೋಪನ್‍ಹೇಗೆನ್ ವಿಶ್ವವಿದ್ಯಾಲಯವನ್ನು 1479ರಲ್ಲಿ ಸ್ಥಾಪಿಸಿದ. ಈತ ಚತುರ, ವಿವೇಕಶಾಲಿ. 1481ರಲ್ಲಿ ಈತ ಮರಣ ಹೊಂದಿದ.

ಕ್ರಿಶ್ಚನ್ II: 1481-1559. ಸ್ಯಾಕ್ಸನಿಯ ರಾಜ ಹ್ಯಾನ್ಸ್ ಮತ್ತು ರಾಣಿ ಕ್ರಿಸ್ಟಿನಾರ ಮಗ. ಈತ 1513ರಲ್ಲಿ ತನ್ನ ತಂದೆಯ ಮರಣಾನಂತರ ಡೆನ್ಮಾರ್ಕ್ ಮತ್ತು ನಾರ್ವೇ ಸಿಂಹಾಸನವನ್ನೇರಿ ಒಳ್ಳೆಯ ಹೆಸರು ಗಳಿಸಿದ. ಆ ಸಮಯದಲ್ಲಿ ನಾರ್ವೇ, ಸ್ವೀಡನ್ ಮತ್ತು ಡೆನ್ಮಾರ್ಕ್‍ಗಳಲ್ಲಿ ಒಡಕುಂಟಾಯಿತು. ಸ್ವೀಡನಿನವರು ಅವನನ್ನು ರಾಜನೆಂದು ಒಪ್ಪಲಿಲ್ಲ. ಆತ ಸ್ವೀಡನಿನ ಮೇಲೆ ಯುದ್ಧ ಘೋಷಿಸಿ ಎರಡು ಸಾರಿ ಸೋಲನ್ನನುಭವಿಸಿದ. 1520ರ ವೇಳೆಗೆ ಕ್ರಿಶ್ಚನ್ ತನ್ನ ಬಲವನ್ನು ಹೆಚ್ಚಿಸಿಕೊಂಡು ಸ್ವೀಡನಿನ ಮೇಲೆ ಯುದ್ಧ ಮಾಡಿ ಜಯ ಗಳಿಸಿದ. ಸ್ವೀಡನಿನ ನಾಯಕರು ಕ್ರಿಶ್ಚನನನ್ನು ರಾಜನೆಂಬುದಾಗಿ ಒಪ್ಪಿದರು. ಪ್ರತಿಯಾಗಿ ಅವನು ತನ್ನ ವಿರೋಧಿಗಳಿಗೆ ಕ್ಷಮೆ ನೀಡಿದ. ಆದರೆ ಈ ಒಪ್ಪಂದ ಹೆಚ್ಚು ಕಾಲ ಮುಂದುವರಿಯಲಿಲ್ಲ. ಸ್ಟಾಕ್‍ಹೋಂನಲ್ಲಿ ದಂಗೆಯುಂಟಾಗಿ 80 ಮಂದಿ ಸ್ವೀಡಿಷ್ ಪ್ರಮುಖರು ಕೊಲೆಯಾದರು. ಆದ್ದರಿಂದ 1521ರಲ್ಲಿ ಗಸ್ಟೇವಸ್ ವಾಸನ ನಾಯಕತ್ವದಲ್ಲಿ ಸ್ವೀಡನಿನ ಜನರು ಕ್ರಿಶ್ಚನನ ವಿರುದ್ಧ ದಂಗೆಯೆದ್ದು, ಸ್ವತಂತ್ರರಾದರು. ಗಸ್ಟೇವಸ್ ವಾಸ ಸ್ವತಂತ್ರ ಸ್ವೀಡನಿನ ರಾಜನೆಂದು ಘೋಷಿಸಲಾಯಿತು. ನಾರ್ವೀಜಿಯನ್ ಒಕ್ಕೂಟ ಒಡೆದು ಹೋಯಿತು. ಸ್ವೀಡನಿನವರಿಗೆ ರಿಯಾಯಿತಿ ಕೊಡಲು ಕ್ರಿಶ್ಚನ್ ಮುಂದೆ ಬಂದನಾದರೂ ಆ ಕಾಲ ಮೀರಿತ್ತು. ಡೆನ್ಮಾರ್ಕಿನಲ್ಲೂ ಅವನ ಜನಪ್ರಿಯತೆ ಮರೆಯಾಗಿತ್ತು. ಅಲ್ಲಿಯ ಮುಖಂಡರು ಅವನನ್ನು ಸಿಂಹಾಸನದಿಂದ ತೆಗೆಯಲು ಹವಣಿಸಿದರು. ಪರಿಸ್ಥಿತಿಯನ್ನರಿತ ಕ್ರಿಶ್ಚನ್ ಕೋಪೆನ್‍ಹೇಗೆನ್ ನಗರವನ್ನು ತ್ಯಜಿಸಿ 1523ರಲ್ಲಿ ದೇಶಭ್ರಷ್ಟನಾದ. ತನ್ನ ಭಾವಮೈದುನನೂ ಆಸ್ಟ್ರಿಯದ ಸಮ್ರಾಟನೂ ಆದ 5ನೆಯ ಚಾಲ್ರ್ಸ್‍ನ ಸಹಾಯದಿಂದ ಒಂದು ಸೈನ್ಯವನ್ನು ಕಟ್ಟಿ, ತನ್ನ ಹಕ್ಕನ್ನು ಸ್ಥಾಪಿಸಲು 1531ರಲ್ಲಿ ನಾರ್ವೇಗೆ ಹಿಂದಿರುಗಿದಾಗ ಅಲ್ಲಿಯ ಜನರು ಅವನನ್ನು ರಾಜನೆಂದು ಒಪ್ಪಿದರು. ಆದರೆ ಅವನಲ್ಲಿ ಅವಿಶ್ವಾಸವನ್ನು ವ್ಯಕ್ತಪಡಿಸಿ ಅವನನ್ನು ಬಂಧಿಸಿದರು. ಬಂದೀಖಾನೆಯಲ್ಲಿ ಅವನು 1559ರಲ್ಲಿ ಮರಣ ಹೊಂದಿದ.

ಕ್ರಿಶ್ಚನ್ 3: 1503-1559. ಡೆನ್ಮಾರ್ಕ್ ಮತ್ತು ನಾರ್ವೇ ರಾಜ ಮತ್ತು ಡೆನ್ಮಾರ್ಕಿನ 1ನೆಯ ಫ್ರೆಡರಿಕನ ಹಿರಿಯ ಮಗ. ಬಾಲ್ಯದಿಂದಲೂ ಕ್ರಿಶ್ಚನ್ ಮಾರ್ಟಿನ್ ಲೂಥರನ ಪಂಥದ ಅನುಯಾಯಿ. 1521ರಲ್ಲಿ ನಡೆದ ವಮ್ರ್ಸ್ ಪಾರ್ಲಿಮೆಂಟಿನಲ್ಲಿ ಭಾಗವಹಿಸಿದ್ದ. 1523ರಲ್ಲಿ ಡೆನ್ಮಾರ್ಕಿನ ರೀಗ್ಸ್‍ರಾಡ್ ಸಭೆಯಲ್ಲಿ ಇವನ ತಂದೆ ಫ್ರೆಡರಿಕನನ್ನು ದೊರೆಯಾಗಿ ಆರಿಸಿದಾಗ ಕೆಥೊಲಿಕರು ಹೆಚ್ಚು ಸಂಖ್ಯೆಯಲ್ಲಿದ್ದುದರಿಂದ ಲೂಥರ್ ಪಂಥದ ಕ್ರಿಶ್ಚನ್ ಉತ್ತರಾಧಿಕಾರಿಯಾಗಲು ಒಪ್ಪಲಿಲ್ಲ. ಆದರೆ ಅನಂತರ ಡೆನ್ಮಾರ್ಕಿನಲ್ಲಿ ಅನೇಕ ಮತೀಯ ಬದಲಾವಣೆಗಳು ಸಂಭಸಿದುವು. ಜನರು ಲೂಥರನ ಪಂಥಕ್ಕೆ ಸೇರಿದರು. ಅವರು 1ನೆಯ ಫ್ರೆಡರಿಕನ ಅನಂತರ ಅವನ ಹಿರಿಯ ಮಗ ಕ್ರಿಶ್ಚನನೇ ಉತ್ತರಾಧಿಕಾರಿಯೆಂದು ಘೋಷಿಸಿದರು. 1533ರಲ್ಲಿ ಫ್ರೆಡರಿಕನ ಮರಣಾನಂತರ ಕೆಥೊಲಿಕರು ಕ್ರಿಶ್ಚನನ ತಮ್ಮ ಹ್ಯಾನ್ಸನನ್ನು ಸಿಂಹಾಸನಕ್ಕೆ ತರಲು ನಿರ್ಧರಿಸಿದರು. ಆದರೆ ಪ್ರಾಟೆಸ್ಟಂಟರ ಸಹಾಯದಿಂದ 1534ರಲ್ಲಿ ಕ್ರಿಶ್ಚನ್ ಸಿಂಹಾಸನಕ್ಕೆ ಬಂದ. ಅವನು ಲೂಥರನ ಪಂಥಕ್ಕೆ ಸೇರಿದ್ದು ಅದರ ಕೇಂದ್ರವಾದ ವಿಟೆನ್‍ಬರ್ಗ್ ವಿಶ್ವವಿದ್ಯಾಲಯದೊಡನೆ ನಿಕಟಸಂಪರ್ಕ ಹೊಂದಿದ್ದಾಗ್ಯೂ ತನ್ನ ಕೆಥೊಲಿಕ್ ಪ್ರಜೆಗಳ ಬಗ್ಗೆ ಉದಾರ ನೀತಿಯನ್ನನುಸರಿಸಿ ಜನಪ್ರಿಯನಾದ.

	ಅವನು ಪ್ರಾಟೆಸ್ಟಂಟ್ ಪಂಥವನ್ನವಲಂಬಿಸಿದ್ದ ಜರ್ಮನ್ ರಾಜ್ಯಗಳೊಡನೆ ಮೈತ್ರಿಯಿಂದಿದ್ದುದರಿಂದ ಹೋಲಿ ರೋಮನ್ ಚಕ್ರವರ್ತಿ 5ನೆಯ ಚಾಲ್ರ್ಸ್‍ನ ವಿರೋಧವನ್ನು ಎದುರಿಸಬೇಕಾಗಿ ಬಂತು. 1542ರಲ್ಲಿ ಡೆನ್ಮಾರ್ಕ್ ಹಾಗೂ ಇತರ ಪ್ರಾಟೆಸ್ಟಂಟ್ ರಾಷ್ಟ್ರಗಳ ಮತ್ತು ಆಸ್ಟ್ರಿಯ ಸಾಮ್ರಾಜ್ಯ ಇವುಗಳ ನಡುವೆ ಯುದ್ಧ ಪ್ರಾರಂಭವಾಯಿತು. ಆದರೆ 1544ರಲ್ಲಿ 5ನೆಯ ಚಾಲ್ರ್ಸ್ ಕ್ರಿಶ್ಚನನೊಡನೆ ಒಪ್ಪಂದ ಮಾಡಿಕೊಂಡ. ಯೂರೋಪಿನ ಮತೀಯ ಯುದ್ಧಗಳಲ್ಲಿ ಡೆನ್ಮಾರ್ಕ್ ಭಾಗಿಯಾಗದಂತೆ ಕ್ರಿಶ್ಚನ್ ಉಪಾಯದಿಂದ ವರ್ತಿಸಿದ. ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತಂದುದರಿಂದ ಡೆನ್ಮಾರ್ಕಿನಲ್ಲಿ ಶಾಂತಿ ಸಮೃದ್ಧಿಗಳು ನೆಲಸಿ ಅದು ಯೂರೋಪಿನ ಇತರ ಪ್ರಗತಿಪರ ರಾಷ್ಟ್ರಗಳಂತೆ ಮುಂದುವರಿಯಿತು. 3ನೆಯ ಕ್ರಿಶ್ಚನ್ 1559ರಲ್ಲಿ ಮರಣ ಹೊಂದಿದ.

	ಕ್ರಿಶ್ಚನ್ IV: 1577-1648. ಡೆನ್ಮಾರ್ಕ್ ಮತ್ತು ನಾರ್ವೇ ರಾಜ, ಎರಡನೆಯ ಫ್ರೆಡರಿಕನ ಮಗ. 1588ರಲ್ಲಿ ಫ್ರೆಡರಿಕ್ ಮರಣ ಹೊಂದಿದಾಗ ಕ್ರಿಶ್ಚನನಿನ್ನೂ ಪ್ರಾಪ್ತವಯಸ್ಕನಾಗಿರಲಿಲ್ಲ. ಡೆನ್ಮಾರ್ಕಿನ ರೀಗ್ಸ್‍ರಾಡ್ ಸಭೆಯ ನಾಲ್ಕು ಮಂದಿ ಪ್ರತಿನಿಧಿಗಳು ಅವನನ್ನು ರಾಜನೆಂದು ಘೋಷಿಸಿ 1596ರ ವರೆಗೂ ಅವನ ಹೆಸರಿನಲ್ಲಿ ಆಡಳಿತ ನಡೆಸಿದರು. ಅನಂತರ ಕ್ರಿಶ್ಚನ್ ವಿಧಿವತ್ತಾಗಿ ಸಿಂಹಾಸನಾರೋಹಣ ಮಾಡಿ ಆಡಳಿತವನ್ನೂ ವಹಿಸಿಕೊಂಡ. 159 ರಲ್ಲಿ ಈತ ರಾಜಕೀಯದಲ್ಲಿ ಸ್ವತಂತ್ರ ಧೋರಣೆ ವಹಿಸಿ ಸ್ವೀಡನಿನ ವಿರುದ್ಧ ಕ್ರಮವನ್ನೂ ಕೈಗೊಂಡಾಗ ರೀಗ್ಸ್‍ರಾಡ್ ಅವನ ಸ್ವತಂತ್ರ ನೀತಿಗೆ ಅಡ್ಡಿ ಮಾಡಿತು. 1611-13ರ ಕಾಲ್ಮರ್ ಯುದ್ಧದಲ್ಲಿ ಸ್ವೀಡನಿನ ಗಸ್ಪೇವಸ್ ಅಡಾಲ್ಫಸನ ವಿರುದ್ಧ ಜಯಗಳಿಸಿದರೂ ಅದರಿಂದ ಪ್ರಯೋಜನವಾಗಲಿಲ್ಲ. ಅವನು ಕೈಗಾರಿಕೆಗಳನ್ನು ಸ್ಥಾಪಿಸಿದನಲ್ಲದೆ ವಾಣಿಜ್ಯ ಸಂಘಗಳಿಗೆ ಪ್ರೋತ್ಸಾಹ ನೀಡಿದ. ಡೆನ್ಮಾರ್ಕಿನಲ್ಲಿ ಅನೇಕ ಹೊಸ ನಗರಗಳು ನಿರ್ಮಾಣವಾದುವು. ಡಚ್ ಶಿಲ್ಪಗಳ ಸಹಾಯದಿಂದ ಅನೇಕ ಸುಂದರ ಸಾರ್ವಜನಿಕ ಭವನಗಳನ್ನು ಕಟ್ಟಿಸಿದ. ಗಸ್ಟೇವಸನ ನೇತೃತ್ವದಲ್ಲಿ ಸ್ವೀಡನ್ ಪ್ರಬಲವಾಗಿದ್ದುದರಿಂದ ಡೆನ್ಮಾರ್ಕ್ ರಾಜ್ಯವನ್ನು ಬಲಯುತಗೊಳಿಸಲು ಅವನು ಕೋಪೆನ್‍ಹೇಗೆನ್ ಬಳಿಯಲ್ಲಿ ಹೊಸ ಹಡಗು ಕಟ್ಟೆಯನ್ನು ನಿರ್ಮಿಸಿ ನೌಕಾದಳವನ್ನು ಬಲಗೊಳಿಸಿದ. ಆ ವೇಳೆಗಾಗಲೇ ಯೂರೋಪಿನ ಇತರ ಭಾಗಗಳಲ್ಲಿ ನಡೆಯುತ್ತಿದ್ದ 30 ವರ್ಷಗಳ ಯುದ್ಧದಲ್ಲಿ 1624ರಲ್ಲಿ ಕೆಥೋಲಿಕ್ ರಾಷ್ಟ್ರಗಳು ವಿಜಯೋನ್ಮುಖವಾಗಿದ್ದುದರಿಂದ ಕ್ರಿಶ್ಚನ್ ಪ್ರಾಟೆಸ್ಟೆಂಟರಿಗೆ ಸಹಾಯ ಮಾಡಲು ಯುದ್ಧದಲ್ಲಿ ಭಾಗಿಯಾಗಬೇಕಾಯಿತು. ಪ್ರಾರಂಭದಲ್ಲಿ ಆತ ಜಯಗಳಿಸಿದನಾದರೂ 1626ರಲ್ಲಿ ಪರಾಜಯ ಹೊಂದಿದ. 1628ರಲ್ಲಿ ಗಸ್ಟೇವಸನೊಡನೆ ಒಪ್ಪಂದ ಮಾಡಿಕೊಂಡು ತನ್ನ ಸ್ಥಾನವನ್ನು ಕಾಪಾಡಿಕೊಳ್ಳಬೇಕಾಯಿತು. ಹಾಗೂ ಹೋಲಿ ರೋಮನ್ ಸಾಮ್ರಾಜ್ಯದೊಡನೆ 1629ರಲ್ಲಿ ಸಂಧಾನ ಮಾಡಿಕೊಂಡ.

	1632ರಲ್ಲಿ ಗಸ್ಟೇವಸನ ಮರಣಾನಂತರ ಡೆನ್ಮಾರ್ಕಿನ ಪ್ರಭಾವವನ್ನು ವಿಸ್ತರಿಸಲು ಕ್ರಿಶ್ಚನ್ ಪ್ರಯತ್ನಿಸಿದ. ಅವನ ಈ ಪ್ರಯುತ್ನದಿಂದ ಸ್ವೀಡನಿಗೂ ಡೆನ್ಮಾರ್ಕಿಗೂ ಮತ್ತೆ ಯುದ್ಧ ಅನಿವಾರ್ಯವಾಯಿತು. ಸ್ವೀಡನಿನ ಪಡೆಗಳು ಜಟ್‍ಲೆಂಡನ್ನು ವಶಪಡಿಸಿಕೊಂಡು ಮುನ್ನುಗ್ಗಿ, ಡೆನ್ಮಾರ್ಕಿನ ನೌಕಾಬಲವನ್ನು ನಾಶಮಾಡಿದುವು. 1644ರಲ್ಲಿ ಕ್ರಿಶ್ಚನ್ ಸ್ವೀಡನಿನೊಡನೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಬೇಕಾಯಿತು. ಕ್ರಿಶ್ಚನನ ಯುದ್ಧಪರ ನೀತಿಯಿಂದ ಡೆನ್ಮಾರ್ಕಿನ ಮುಖಂಡರು ಅಸಂತುಷ್ಟರಾದರು. 4ನೆಯ ಕ್ರಿಶ್ಚನ್ 1648ರಲ್ಲಿ ಮರಣ ಹೊಂದಿದ.

ಕ್ರಿಶ್ಚನ್ v: 1646-1699. ಡೆನ್ಮಾರ್ಕಿನ ಮೂರನೆಯ ಫ್ರೆಡರಿಕನ ಮಗ; ಡೆನ್ಮಾರ್ಕ್-ನಾರ್ವೇಗಳ ದೊರೆ. ತಂದೆಯ ಮರಣಾನಂತರ 1670ರಲ್ಲಿ ರಾಜನಾದ. ಡೆನ್ಮಾರ್ಕಿನ ಸಂಪ್ರದಾಯವಾದಿ ಶ್ರೀಮಂತ ಮುಖಂಡರ ರೀತಿ ಅವನಿಗೆ ಹಿಡಿಸಲಿಲ್ಲ. 5ನೆಯ ಕ್ರಿಶ್ಚನ್ ಸಾಮಾನ್ಯ ಪ್ರಜೆಗಳಲ್ಲಿ ಹೆಚ್ಚು ಸಹಾನುಭೂತಿ ಹೊಂದಿದ್ದು ಅವರಿಗೆ ಆಡಳಿತದಲ್ಲಿ ದೊಡ್ಡದೊಡ್ಡ ಹುದ್ದೆಗಳನ್ನು ನೀಡಿದ. ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಪ್ರತಿನಿಧಿಗಳ ಸಭೆಗಳನ್ನು ಸ್ಥಾಪಿಸಿದ. ಆತನ ಕಾಲದಲ್ಲಿ ನಡೆದ ಸ್ಕ್ಯಾನಿಯನ್ ಯುದ್ಧದಿಂದಾಗಿ ಡೆನ್ಮಾರ್ಕ್ ಹಣ ಮತ್ತು ಸೈನ್ಯದ ಕೊರತೆಯನ್ನು ವಿಶೇಷವಾಗಿ ಎದುರಿಸಬೇಕಾಗಿ ಬಂತು. ಕ್ರಿಶ್ಚನ್ ಎದೆಗೆಡದೆ ಪರಿಸ್ಥಿತಿಯನ್ನು ಸುಧಾರಿಸಿದ. 1683ರಲ್ಲಿ ಅವನು ಹೊಸ ನ್ಯಾಯ ಸಂಹಿತೆಯೊಂದನ್ನು ಜಾರಿಗೆ ತಂದ. ತನ್ನ ಕಾಲದ ರಾಜಕೀಯ ನೀತಿಗಳ, ನಿರಂಕುಶಾಧಿಕಾರದ ಬಗ್ಗೆ ವಿವರಗಳನ್ನೊಳಗೊಂಡ ಲೇಖನವೊಂದನ್ನು ತನ್ನ ಮಗ 4ನೆಯ ಫ್ರೆಡರಿಕನಿಗೆ ಅಂಕಿತ ಮಾಡಿದ. 5ನೆಯ ಕ್ರಿಶ್ಚನ್ 1699ರಲ್ಲಿ ಬೇಟೆಯಾಡುತ್ತಿದ್ದಾಗ ದುರ್ಮರಣಕ್ಕೆ ಈಡಾದ.

ಕ್ರಿಶ್ಚನ್ VI: 1699-1746. ಡೆನ್ಮಾರ್ಕ್ ಮತ್ತು ನಾರ್ವೇ ರಾಜ 4ನೆಯ ಫ್ರೆಡರಿಕನ ಮಗ. ತನ್ನ ತಂದೆಯ ಮರಣಾನಂತರ 1730ರಲ್ಲಿ ಪಟ್ಟಕ್ಕೆ ಬಂದ. ಈತ ಉದಾರಿಯೂ ದೂರದೃಷ್ಟಿಯುಳ್ಳವನೂ ಆಗಿದ್ದ. ದಕ್ಷರಾದ ಮಂತ್ರಿಗಳನ್ನು ನೇಮಿಸಿಕೊಂಡು ವಿಚಕ್ಷಣೆಯಿಂದ ಆಳಿದ. ಅದುವರೆಗೂ ಆಸ್ಥಾನದಲ್ಲಿ ಆಚರಣೆಯಲ್ಲಿದ್ದ ಹಲವು ಅರ್ಥರಹಿತ ಪದ್ಧತಿಗಳನ್ನು ಇವನ ಆಳ್ವಿಕೆಯ ಕಾಲದಲ್ಲಿ ನಿಲ್ಲಿಸಲಾಯಿತು. ರಾಜಧಾನಿಯಲ್ಲಿ ಭವ್ಯ ಭವನಗಳನ್ನು ಕಟ್ಟಿಸಿದ. ಇವನದು ಶಾಂತಿ ಪರವಾದ ನೀತಿಯಾಗಿತ್ತು. ಈತ 1734ರಲ್ಲಿ ಸ್ವೀಡನಿನೊಡನೆ 15 ವರ್ಷಗಳ ಕಾಲದ ಯುದ್ಧ ನಿಷೇಧ ಒಪ್ಪಂದವನ್ನು ಮಾಡಿಕೊಂಡ. ಫ್ರಾನ್ಸಿನೊಡನೆಯೂ ಶಾಂತಿ ಬೆಳಸಿದ. ಡೆನ್ಮಾರ್ಕಿನ ವಾಣಿಜ್ಯ ನೀತಿಯನ್ನೂ ವಿದ್ಯಾಭ್ಯಾಸ ಪದ್ಧತಿಯನ್ನೂ ಪ್ರಗತಿಪರಗೊಳಿಸಿದ. ಈತ 1746ರಲ್ಲಿ ಮರಣ ಹೊಂದಿದ.

ಕ್ರಿಶ್ಚನ್ VII: 1749-1808. ಡೆನ್ಮಾರ್ಕ್ ಮತ್ತು ನಾರ್ವೇ ರಾಜ; ಐದನೆಯ ಫ್ರೆಡರಿಕನ ಮಗ. ತನ್ನ ತಂದೆಯ ಮರಣಾನಂತರ 1766ರಲ್ಲಿ ಪಟ್ಟಕ್ಕೆ ಬಂದ. ಶಿಕ್ಷಣವಾಗಲಿ, ಇತರ ಧೀಮಂತ ಗುಣಗಳಾಗಲಿ ಅವನಲ್ಲಿರಲಿಲ್ಲ. 1766ರಲ್ಲಿ ಫ್ರೆಡರಿಕನ ಮಗಳಾದ ಕೆರೋಲಿನ್ ಮೆಟಿಲ್ಡಳೊಡನೆ ಅವನ ಮದುವೆಯಾಯಿತು. ಕ್ರಿಶ್ಚನ್ ಇಂದ್ರಿಯ ಲೋಲುಪನಾಗಿ ದುಶ್ಚಟಗಳಿಗೆ ಬಲಿಯಾಗಿ ಮಾನಸಿಕ ಆರೋಗ್ಯವನ್ನು ಕಳೆದುಕೊಂಡ. 1768ರಲ್ಲಿ ಹಾಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಸಂಚರಿಸಿ 1769ರಲ್ಲಿ ಹಿಂದಿರುಗಿದಾಗ ಅವನ ಮನಸ್ಸಿನ ಸ್ತಿಮಿತ ಸಂಪೂರ್ಣವಾಗಿ ಹಾಳಾಗಿತ್ತು. ಅಧಿಕಾರ ಮಂತ್ರಿಗಳ ಕೈಸೇರಿತು. ಮಂತ್ರಿ ಸ್ಟ್ರೂಯನ್ಸೀಗೂ ರಾಣಿಗೂ ಅನೈತಿಕ ಸಂಬಂಧವಿದ್ದುದರಿಂದ ಅವನನ್ನು ರೀಗ್ಸ್‍ರಾಡ್ ವಿಚಾರಣೆಗೊಳಪಡಿಸಿ 1772ರಲ್ಲಿ ಅವನಿಗೆ ಮರಣದಂಡನೆ ವಿಧಿಸಲಾಯಿತು. ರಾಣಿ ವಿವಾಹವಿಚ್ಛೇದನ ಶಿಕ್ಷೆಗೊಳಗಾದಳು. ಅನಂತರ 1808ರಲ್ಲಿ ಕ್ರಿಶ್ಚನ್ ಮರಣ ಹೊಂದುವವರೆಗೆ ರಾಜಕುಮಾರನೂ ಮಂತ್ರಿಗಳೂ ಆಡಳಿತ ನಡೆಸಿದರು.

ಕ್ರಿಶ್ಚನ್ VIII: 1786-1848. ಈತ 1839-1848ರಲ್ಲಿ ಡೆನ್ಮಾರ್ಕಿನ ರಾಜನಾಗಿದ್ದ. ಇವನು 6ನೆಯ ಫ್ರೆಡರಿಕನ ಕಿರಿಯ ಮಗ. ಕೀಲ್ ಒಪ್ಪಂದದ ಪ್ರಕಾರ 6ನೆಯ ಫ್ರೆಡರಿಕ್ ನಾರ್ವೇಯನ್ನು ಸ್ವೀಡನಿಗೆ ವಹಿಸಿಕೊಡಬೇಕಾಗಿತ್ತು. ಆದರೆ ರಾಜಕುಮಾರ ಕ್ರಿಶ್ಚನ್ ಅದನ್ನು ವಿರೋಧಿಸಿದ. ವಿಧಾನಸಭೆಯಲ್ಲಿದ್ದ ಈತನ ಹಿಂಬಾಲಕರು 1814ರಲ್ಲಿ ಇವನನ್ನು ನಾರ್ವೇಯ ರಾಜನನ್ನಾಗಿ ಚುನಾಯಿಸಿದರು. ಕೀಲ್ ಒಪ್ಪಂದವನ್ನು ಗೌರವಿಸಿ, ನಾರ್ವೇಯ ಅಧಿಕಾರವನ್ನು ತ್ಯಜಿಸುವಂತೆ ಆಸ್ಟ್ರಿಯ, ರಷ್ಯ, ಪ್ರಷ್ಯ ಮತ್ತು ಇಂಗ್ಲೆಂಡ್ ರಾಜತಾಂತ್ರಿಕರು ಕ್ರಿಶ್ಚನನನ್ನು ಒತ್ತಾಯಪಡಿಸಿದರು. ಕ್ರಿಶ್ಚನ್ ಈ ಒತ್ತಾಯವನ್ನು ವಿರೋಧಿಸಿ ಸ್ವೀಡನಿನ ಮೇಲೆ ಯುದ್ಧ ಹೂಡಿದ. 1814ರಲ್ಲಿ ನಡೆದ ಅಲ್ಪಕಾಲದ ಯುದ್ಧದಲ್ಲಿ ಸ್ವೀಡನಿನ ಪಡೆಗಳು ನಾರ್ವೇ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದುವು. 1814ರ ಆಗಸ್ಟ್ 14ರಲ್ಲಿ ಮಾಸ್ ಶಾಂತಿ ಒಪ್ಪಂದವಾಗಿ ಯುದ್ಧ ಕೊನೆಗೊಂಡಿತು. ಕ್ರಿಶ್ಚನ್ ನಾರ್ವೇ ತ್ಯಜಿಸಿ ಡೆನ್ಮಾರ್ಕಿಗೆ ಹೋಗಬೇಕಾಯಿತು. 1839ರಲ್ಲಿ ತನ್ನ ತಂದೆ 6ನೆಯ ಫ್ರೆಡರಿಕನ ಮರಣಾನಂತರ ಆತ ಸ್ವೀಡನಿನ ರಾಜನಾದ. ಲಿಬರಲ್ ಪಕ್ಷದ ಮುಖಂಡರು ಸೂಚಿಸಿದ ಹಲವು ಸುಧಾರಣೆಗಳನ್ನು ಕ್ರಿಶ್ಚನ್ ಒಪ್ಪದಿದ್ದಾಗ್ಯೂ ತಾನೇ 1843ರಲ್ಲಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದ. ಅವನು 1848ರಲ್ಲಿ ಮರಣ ಹೊಂದಿದ.
ಕ್ರಿಶ್ಚನ್ IX: 1818-1906. ಷೆಲ್ಸ್‍ವಿಗ್-ಹಾಲ್‍ಸ್ಟೇನಿನ ಡ್ಯೂಕ್ ವಿಲಿಯಂನ ಕಿರಿಯ ಮಗ; ಡೆನ್ಮಾರ್ಕಿನ ರಾಜ. ಈತ 1835ರಲ್ಲಿ ಸೈನ್ಯಕ್ಕೆ ಸೇರಿದ. 1842ರಲ್ಲಿ ಡೆನ್ಮಾರ್ಕಿನ ರಾಜ 7ನೆಯ ಫ್ರೆಡರಿಕನ ದಾಯಾದಿ ಸೋದರಿಯೊಡನೆ ಈತನ ಮದುವೆಯಾಯಿತು. 7ನೆಯ ಫ್ರೆಡರಿಕನಿಗಾಗಲಿ ಅವನ ತೀರ ಸಮೀಪದ ಸಂಬಂಧಿಗಳಾಗಲಿ ಮಕ್ಕಳಿರಲಿಲ್ಲವಾದ್ದರಿಂದ ಡೆನ್ಮಾರ್ಕಿನ ಸಿಂಹಾಸನಕ್ಕೆ ಉತ್ತರಾಧಿಕಾರಿಯಿಲ್ಲವಾಗಿತ್ತು. ಡೆನ್ಮಾರ್ಕಿನ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು 1852ರಲ್ಲಿ ಲಂಡನಿನಲ್ಲಿ ಸೇರಿದ್ದ ಐರೋಪ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆ ಕ್ರಿಶ್ಚನನನ್ನು ಡೆನ್ಮಾರ್ಕಿಗೆ ಉತ್ತರಾಧಿಕಾರಿಯಾಗಿ ನಾಮಕರಣ ಮಾಡಿತು. 1863ರಲ್ಲಿ 7ನೆಯ ಫ್ರೆಡರಿಕ್ ಮರಣ ಹೊಂದಿದ ಅನಂತರ ಕ್ರಿಶ್ಚನ್ ಡೆನ್ಮಾರ್ಕಿನ ರಾಜನಾದ. ಇವನ ಆಳ್ವಿಕೆಯಲ್ಲಿ ಷೆಲ್ಸ್‍ವಿಗ್‍ಗೆ ಸಂಬಂಧಿಸಿದ ಜಿಜ್ಞಾಸೆ ಬಹುಕಾಲ ಮುಂದುವರಿಯಿತು. ಅಧಿಕಾರಕ್ಕಾಗಿ ಬಲಪಕ್ಷ ವಾಮಪಕ್ಷಗಳ ಮಧ್ಯೆ ಅವಿರತ ಹೋರಾಟ ನಡೆಯಿತು. 1901ರಲ್ಲಿ ಸಂಪುಟ ಪದ್ಧತಿಯ ಕಾನೂನಿಗೆ ಕ್ರಿಶ್ಚನ್ ಒಪ್ಪಿಗೆ ನೀಡಬೇಕಾಯಿತು. ತನ್ನ ಕುಮಾರಿ ಅಲೆಕ್ಸಾಂಡ್ರಳನ್ನು ಗ್ರೇಟ್ ಬ್ರಿಟನಿನ ರಾಜ 7ನೆಯ ಎಡ್ವರ್ಡ್‍ನಿಗೆ ವಿವಾಹ ಮಾಡಿಕೊಟ್ಟುದರಿಂದ ಕ್ರಿಶ್ಚನನ ಪ್ರತಿಷ್ಠೆ ಹೆಚ್ಚಿತು. ಅವನು 1906ರಲ್ಲಿ ಮರಣ ಹೊಂದಿದ.

ಕ್ರಿಶ್ಚನ್ X: 1870-1947. 1912-1947ರಲ್ಲಿ ಡೆನ್ಮಾರ್ಕಿನ ಮತ್ತು 1918-44ರಲ್ಲಿ ನಾರ್ವೇ-ಸ್ವೀಡನ್‍ಗಳ ದೊರೆ. 8ನೆಯ ಫ್ರೆಡರಿಕನ ಮಗ. ಸಿಂಹಾಸನಕ್ಕೆ ಬರುವ ಮೊದಲು 1889ರಲ್ಲಿ ಸೈನ್ಯ ಸೇರಿ 1908ರಲ್ಲಿ ಮೇಜರ್-ಜನರಲ್ ಹುದ್ದೆ ಪಡೆದ. 1906ರಿಂದ ಯುವರಾಜನಾಗಿದ್ದ. ತಂದೆಯ ಮರಣಾನಂತರ 1912ರಲ್ಲಿ ರಾಜನಾದ. ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ 1914ರ ಕೊನೆಯಲ್ಲಿ ನಡೆದ ಸ್ಕಾಂಡಿನೇವಿಯನ್ ರಾಜರ ಸಭೆಯಲ್ಲಿ ಭಾಗವಹಿಸಿದ್ದ. 1915ರಲ್ಲಿ ಅವನು ಡೆನ್ಮಾರ್ಕಿನ ಹೊಸ ವಿಧೇಯಕಕ್ಕೆ ಮನ್ನಣೆ ನೀಡಿದುದರಿಂದ ಸ್ತ್ರೀಯರಿಗೂ ಮತದಾನದ ಹಕ್ಕು ಲಭಿಸಿತು.
ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನರು ಡೆನ್ಮಾರ್ಕನ್ನು ಆಕ್ರಮಿಸಿದರು. 10ನೆಯ ಕ್ರಿಶ್ಚನ್ ನಾಟ್ಸಿಗಳನ್ನು ವಿರೋಧಿಸಿದ್ದರಿಂದ ಮಿತ್ರರಾಷ್ಟ್ರಗಳ ಮನ್ನಣೆ ಅವನಿಗೆ ದೊರಕಿತು. 1943ರಲ್ಲಿ ಜರ್ಮನರು ಅವನನ್ನು ಬಂಧಿಸಿದರು. ಜರ್ಮನಿ ಸೋಲುವವರೆಗೂ ಅವನು ಬಂಧನದಲ್ಲಿದ್ದ. 1945ರಲ್ಲಿ ಜರ್ಮನ್ ಆಕ್ರಮಣ ತೆರವಾದ ಅನಂತರ ಡೇನಿಷ್ ಪಾರ್ಲಿಮೆಂಟನ್ನು ಸೇರಿಸಿ 1947ರಲ್ಲಿ ತನ್ನ ಮರಣದವರೆಗೆ ಆಡಳಿತವನ್ನು ಮುಂದುವರಿಸಿದ. 1944ರಲ್ಲಿ ಐಸ್ಲೆಂಡಿನ ಒಕ್ಕೂಟ ಕಾಯಿದೆಯನ್ನು ತಿದ್ದುಪಡಿ ಮಾಡಿದಾಗ ಐಸ್ಲೆಂಡ್ ಸ್ವತಂತ್ರ ಗಣರಾಜ್ಯವಾಯಿತು.					(ಜಿ. ಆರ್. ಆರ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ